1894-1980. 1969 ಆಗಸ್ಟ್ 24ರಿಂದ ಭಾರತ ಗಣರಾಜ್ಯದ ನಾಲ್ಕನೆಯ ಅಧ್ಯಕ್ಷರು. 1894ರ ಆಗಸ್ಟ್ 10ರಂದು ಅಂದಿನ ಮದ್ರಾಸ್ ಪ್ರೆಸಿಡೆನ್ಸಿ ಇಂದಿನ ಒರಿಸ್ಸಾದ ಬರ್ಹಾಂಪುರದಲ್ಲಿ ಜನ್ಮತಾಳಿದರು. ಏಳು ಗಂಡು ಐದು ಹೆಣ್ಣುಮಕ್ಕಳ ಸಂಸಾರದಲ್ಲಿ ಇವರು ಎರಡನೆಯ ಮಗ. ತಂದೆ ವಿ ವಿ ಜೋಗಯ್ಯ ಪಂತಲು, ವಕೀಲರು; ರಾಜಕಾರಣದಲ್ಲೂ ಅವರಿಗೆ ಆಸಕ್ತಿಯಿತ್ತು. ರಾಷ್ಟ್ರೀಯ ಚಳವಳಿಯಲ್ಲಿ ಆಸಕ್ತಿ; 20ರ ದಶಕಗಳಲ್ಲಿ ಪಂಡಿತ್ ಮೋತಿಲಾಲ ನೆಹರೂ ಹಾಗೂ ಚಿತ್ತರಂಜನ್ದಾಸರ ಸ್ವರಾಜ್ಯ ಪಾರ್ಟಿ ಯಲ್ಲಿ ಸಕ್ರಿಯ. ಇದು ಎಳೆಯ ವಿ.ವಿ. ಗಿರಿಯ ಮೇಲೆ ಸಹಜವಾಗಿ ಪ್ರಭಾವ ಬೀರಿತು. ಗಿರಿಯವರ ಒಬ್ಬ ಚಿಕ್ಕಪ್ಪ ಹನುಮಂತರಾವ್ ಸಾರ್ವಜನಿಕ ಸೇವೆಯಲ್ಲಿ ಆಸಕ್ತರಾಗಿದ್ದರು. ಇನ್ನೊಬ್ಬ ಚಿಕ್ಕಪ್ಪ ವಿಶ್ವನಾಥ ರಾವ್ ಸ್ಥಾಪಿಸಿದ್ದ ತರುಣ ಸಂಘಕ್ಕೆ ಗಿರಿಯವರು ಬಾಲ್ಯದಲ್ಲೇ ಸದಸ್ಯರಾ ಗಿದ್ದರು. ಆ ಸಂಘದ ಗ್ರಂಥಾಲಯಕ್ಕೆ ದಾನವಾಗಿ ಶೇಖರಿಸಲಾಗಿದ್ದ ಸುಮಾರು 2,000 ಗ್ರಂಥಗಳಲ್ಲಿ ರಾಜಕೀಯ ನಾಯಕರ ಚರಿತ್ರೆಗಳೇ ಹೆಚ್ಚಾಗಿದ್ದವು. ಆ ಸಂಘ ಬಡವರಿಗೆ ಅನ್ನದಾನಕ್ಕಾಗಿ ಮಧುಕರಿ ವ್ಯವಸ್ಥೆಯನ್ನೂ ತಿಲಕರ ಪೈಸಾ ನಿಧಿಗಾಗಿ ಧನ ಸಂಗ್ರಹದ ವ್ಯವಸ್ಥೆಯನ್ನೂ ಮಾಡಿತ್ತು. ಬಾಲ್ಯದಲ್ಲಿ ಗಿರಿಯವರಿಗೆ ಮಾರ್ಗದರ್ಶನ ನೀಡಿದವರು ಶಿಕ್ಷಕ ರಾಮಲಿಂಗಂ. ಆಗಿನ ಇವರ ಚಟುವಟಿಕೆಗಳು ಗಾಂಧಿಯವರ ಸತ್ಯಾಗ್ರಹವೇ ಮುಂತಾದ ಅನಂತರದ ಚಳವಳಿಗಳಲ್ಲಿ ಭಾಗವಹಿಸಲು ಗಿರಿಯವರಿಗೆ ಪೂರ್ವಭಾವಿ ಸಿದ್ಧತೆಯನ್ನೊದಗಿಸಿದವು.

ಗಿರಿಯವರು ತಮ್ಮಂತೆಯೇ ವಕೀಲರಾಗಬೇಕೆಂದು ಅವರ ತಂದೆಯವರ ಬಯಕೆಯಾಗಿತ್ತು. ಮದ್ರಾಸಿನಲ್ಲಿ ಕೇಂಬ್ರಿಜ್ ಸೀನಿಯರ್ ಪರೀಕ್ಷೆ ಮಾಡಿ ಐರ್ಲೆಂಡಿನ ಡಬ್ಲಿನ್ ರಾಷ್ಟ್ರೀಯ ವಿದ್ಯಾಲಯವನ್ನು ಸೇರಿ ಕಿಂಗ್ಸ್ ಇನ್ನಲ್ಲಿ ಬ್ಯಾರಿಸ್ಟರ್ ಆದರು. ಸಂಪ್ರದಾಯಸ್ಥ ಬ್ರಾಹ್ಮಣ ಮನೆತನಕ್ಕೆ ಸೇರಿದ ಗಿರಿಯವರು ತಮ್ಮ ತಾಯಿಗೆ ಕೊಟ್ಟ ಮಾತಿನಂತೆ ಶಾಕಾಹಾರಿಗಳಾಗಿಯೇ ಅಲ್ಲಿ ಕಾಲ ಕಳೆದರು. ಐರ್ಲೆಂಡು ಇಂಗ್ಲೆಂಡಿನಿಂದ ಸ್ವತಂತ್ರವಾಗಲು ಹೋರಾಟದ ಹವಣಿಕೆಯಲ್ಲಿದ್ದದ್ದನ್ನು ಕಂಡಾಗ ಗಿರಿಯವರಿಗೆ ಭಾರತ ಐರ್ಲೆಂಡ್ಗಳ ಆಶೋತ್ತರಗಳಲ್ಲಿದ್ದ ಸಾಮ್ಯ ಗೋಚರವಾಯಿತು. ಐರ್ಲೆಂಡಿನವರು ಇಂಗ್ಲೆಂಡಿನವರಿಗಿಂತ ಹೆಚ್ಚಾಗಿ ಭಾರತೀಯರನ್ನು ಗೌರವಿಸುತ್ತಿದ್ದದ್ದನ್ನು ಗಮನಿಸಿದರು. ಐರ್ಲೆಂಡಿನ ನಾಯಕ ಡ ವಲೇರ ಅವರನ್ನು ಗಿರಿಯವರು ಸಂದರ್ಶಿಸಿದರು.

ಗಿರಿ ಅವರು ಬಿ.ಎ. ಪದವಿಗೆ ಸಾಹಿತ್ಯ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಂವಿಧಾನ, ನ್ಯಾಯ, ಅಂತರಾಷ್ಟ್ರೀಯ ಕಾನೂನುಗಳನ್ನು ಆರಿಸಿಕೊಂಡಿದ್ದರು. ಅಲ್ಲಿ ಅನೇಕ ಭಾರತೀಯ ವಿದ್ಯಾರ್ಥಿಗಳು ಸೇರಿ ಕ್ರಾಂತಿಕಾರಿ ಸಂಘವನ್ನು ಸ್ಥಾಪಿಸಿಕೊಂಡರು. ರಾಷ್ಟ್ರಪ್ರೇಮವನ್ನು ತೋರಿಸಲು ವಿದೇಶಿ ಅರಿವೆಗಳನ್ನು ಸುಟ್ಟುಹಾಕಿದರು.

ಗಿರಿಯವರು 1914ರಲ್ಲಿ ಗಾಂಧಿಯವರನ್ನು ಲಂಡನ್ನಿನಲ್ಲಿ ಸಂದರ್ಶಿಸಿದರು. ಅವರ ಎಲ್ಲಾ ವಿಚಾರಧಾರೆಗಳನ್ನೂ, ಉದಾಹರಣೆಗೆ ಅಹಿಂಸೆಯನ್ನು, ಆಗ ಗಿರಿ ಒಪ್ಪಲಿಲ್ಲವಾದರೂ ಗಾಂಧಿಯವರಿಂದ ಬಹಳಮಟ್ಟಿಗೆ ಪ್ರಭಾವಿತರಾದರು. ಯುದ್ಧದಲ್ಲಿ ಬ್ರಿಟಿಷರಿಗೆ ನೆರವಾಗಲು ಗಾಂಧಿಯವರ ಮಾತಿನಂತೆ ಗಿರಿಯವರು ರೆಡ್ ಕ್ರಾಸ್ ಸಂಸ್ಥೆಯನ್ನು ಸೇರಿದ್ದರೂ ಅನಂತರ ವಿಚಾರಮಾಡಿದಾಗ ತಾವು ಅದಕ್ಕೆ ಸೇರಿದ್ದು ತಪ್ಪೆನಿಸಿ ಕೂಡಲೇ ಗಾಂಧಿಯವರಿಗೆ ಪತ್ರ ಬರೆದು ಆ ಸಂಸ್ಥೆಯಿಂದ ಬಿಡುಗಡೆ ಹೊಂದಿದರು. ಅವರ ಈ ಕ್ರಮ ಆಗ ಕಾನೂನು ವಿರೋಧವಾಗಿತ್ತಾದರೂ ಗಿರಿಯವರು ಹೆದರಲಿಲ್ಲ.
1916ರಲ್ಲಿ ಜರುಗಿದ ಈಸ್ಟರ್ ದಂಗೆಯ ಅನಂತರ ಸಂಭವಿಸಿದ ದುರ್ಘಟನೆಗಳ ವಿಶೇಷ ಪರಿಣಾಮ ಗಿರಿಯವರ ಮೇಲಾಯಿತು. ಬಂದರು, ಗಣಿ ಮತ್ತು ರೈಲ್ವೆಗಳ ಸುಸಂಘಟಿತ ಕಾರ್ಮಿಕರು ಮುಷ್ಕರದ ಮೂಲಕ ಏನು ಮಾಡಬಲ್ಲರೆಂಬುದು ಗಿರಿಯವರಿಗೆ ಮನವರಿಕೆಯಾಯಿತು. ಅವರು ಭಾರತಕ್ಕೆ ಮರಳಿದ ಮೇಲೆ ಇದೇ ರೀತಿ ಕಾರ್ಮಿಕ ಶಕ್ತಿಯನ್ನು ಸಂಘಟಿಸಿ ಅದನ್ನು ರಾಜಕೀಯ ಹೋರಾಟದಲ್ಲಿ ಬಳಸಿಕೊಳ್ಳಬೇಕೆಂದು ಗಿರಿಯವರು ನಿರ್ಧರಿಸಿದರು. ಆ ವೇಳೇಗಾಗಲೇ ಬ್ರಿಟಿಷ್ ಸರ್ಕಾರಕ್ಕೆ ಇವರ ಮೇಲೆ ಸಂಶಯ ಬಂದಿತ್ತು. ಆಗಿನ ಸೆಕ್ರೆಟರಿ ಆಫ್ ಸ್ಟೇಟ್ಸ್ ಚೇಂಬರ್ಲಿನ್, ಕಾಮನ್ಸ್ ಸಭೆಯಲ್ಲಿ ಹೇಳಿಕೆ ಕೊಡುತ್ತ, ಗಿರಿಯವರಿಗೂ ಐರಿಷ್ ನಾಯಕರಿಗೂ ಸಂಪರ್ಕವಿದೆಯೆಂದು ಘೋಷಿಸಿದ. ಇದರ ಪರಿಣಾಮವಾಗಿ ಗಿರಿಯವರಿಗೆ ಅಮೆರಿಕಕ್ಕೆ ಹೋಗಲು ರಹದಾರಿ ಸಿಗಲಿಲ್ಲ. ಇವರು ಸ್ವದೇಶಕ್ಕೆ ಮರಳಿದರು. 1917ರಲ್ಲಿ ಸರಸ್ವತಿಬಾಯಿಯವರೊಡನೆ ಗಿರಿಯವರ ಮದುವೆಯಾಯಿತು.
ಕಾರ್ಮಿಕ ಕ್ಷೇತ್ರವೆಂದರೇನೆಂಬುದು ಇನ್ನೂ ತಿಳಿಯದಿದ್ದ ಆ ಸಮಯದಲ್ಲಿ ಗಿರಿಯವರು ಆ ಕ್ಷೇತ್ರದಲ್ಲಿ ಪದಾರ್ಪಣೆ ಮಾಡಿದರು. 1915ರಲ್ಲಿಯೇ ಸರ್ವೆಂಟ್ಸ್ ಆಫ್ ಇಂಡಿಯ ಸೊಸೈಟಿಯ ಸದಸ್ಯರಾಗಿ ಸೇರಿದ್ದ ಗಿರಿಯವರು ಮಹಾತ್ಮಗಾಂಧಿಯವರ ಸಾಬರ್ಮತಿ ಆಶ್ರಮದಲ್ಲೂ ಕೆಲವು ದಿನ ಇದ್ದರು.
ಗಿರಿಯವರು ಭಾರತಕ್ಕೆ ಮರಳಿದ ಮೇಲೆ ಆಗ ಸುಪ್ರಸಿದ್ಧ ಬ್ಯಾರಿಸ್ಟರರೂ ರಾಜಕಾರಣಿಯೂ ಆಗಿದ್ದ ಟಿ. ಪ್ರಕಾಶಂ ಅವರನ್ನು ವೃತ್ತಿಸಂಬಂಧವಾಗಿ ಭೇಟಿಮಾಡಿ ದರು. ಗಿರಿಯವರು ಅಡ್ವೊಕೇಟ್ ಆಗಿ ಸೇರಿದಾಗ ಗಂಜಾಮಿನ ಜಿಲ್ಲಾ ನ್ಯಾಯಧೀಶ ಅವರಿಗೆ ಮುನ್ಸಿಫ್ ಸ್ಥಾನ ಕೊಡಿಸುವುದಾಗಿ ಹೇಳಿದನೆಂದೂ ಗಿರಿಯವರ ಕ್ರಾಂತಿಕಾರೀ ವಿಚಾರಗಳನ್ನು ಅರಿತಮೇಲೆ ಆತ ಹೆದರಿದನೆಂದೂ ಹೇಳಲಾಗಿದೆ. ಗಿರಿಯವರು ವಕೀಲಿವೃತ್ತಿಯಲ್ಲಿ ಐದುವರ್ಷ ಕಳೆಯುವುದರೊಳಗಾಗಿ ಸ್ವಾತಂತ್ರ್ಯ ಹೋರಾಟ ಇವರನ್ನು ಸೆಳೆಯಿತು. 1916ರಲ್ಲಿ ಇವರು ಲಖನೌದಲ್ಲಿ ಸೇರಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದರು. 1921ರಲ್ಲಿ ಸತ್ಯಾಗ್ರಹ ಚಳವಳಿಯಲ್ಲಿ 350 ಜನರೊಂದಿಗೆ ಇವರು ಗಂಜಾಮಿನಲ್ಲಿ ಸತ್ಯಾಗ್ರಹ ಹೂಡಿ ಬಂಧಿತರಾದರು. 1922ರಲ್ಲಿ ಇವರು ಜೈಲಿನಲ್ಲಿದ್ದಾಗ ರಾಜಕೀಯ ಸ್ನೇಹಿತರನ್ನು ಗಳಿಸಿಕೊಳ್ಳುವ ಅವಕಾಶ ಸಿಕ್ಕಿತು. ಕಾರಾಗೃಹದ ಸುಧಾರಣೆಗಾಗಿ ಅದರ ಒಳಗೆ ಸಂಘಟನೆ ಆಂದೋಲನಗಳನ್ನು ಪ್ರಾರಂಭಿಸಿದರು. 1922ರ ವೇಳೆಗೆ ವಿ ವಿ ಗಿರಿ ಅವರ ಶ್ರಮಜೀವಿವರ್ಗದ ಜತೆ ಸಂಬಂಧ ನಿಕಟಗೊಂಡು, ಎನ್ ಎಮ್ ಜೋಶಿಯವರ ಬಲಗೈ ಭಂಟರಾದರು. ಅಲ್ಲಿಂದ ಮುಂದಕ್ಕೆ ಅವರ ಬಹುಮುಖ್ಯ ಕಾರ್ಯಕ್ಷೇತ್ರ ಕಾರ್ಮಿಕರಂಗವಾಯಿತು.
ಮೂರು ತಿಂಗಳುಗಳ ಅನಂತರ ಕಾರಾಗೃಹದಿಂದ ಹೊರಬಂದ ಕೂಡಲೇ ಖರಗ್ಪುರದ ರೈಲ್ವೆ ಕಾರ್ಮಿಕ ನಿಯೋಗವೊಂದು ಸೆರಮನೆಯ ಹೆಬ್ಬಾಗಿಲಿನಲ್ಲೆ ಗಿರಿಯವರನ್ನು ಸಂದರ್ಶಿಸಿ ತಮ್ಮ ಸಂಘವನ್ನು ಸಂಘಟಿಸಬೇಕೆಂದು ಕೋರಿತು. ಕೂಡಲೇ ಗಿರಿಯವರು ಒಪ್ಪಿಕೊಂಡು ಬಂಗಾಳ, ನಾಗಪುರ ರೈಲ್ವೆ ಸಂಘವನ್ನು ಸ್ಥಾಪಿಸಿದರು. ಒಂದೇ ದಶಕದಲ್ಲಿ ಈ ಸಂಘ ದೊಡ್ಡದಾಗಿ ಬೆಳೆಯಿತು. ಈ ರೈಲ್ವೆಯಲ್ಲಿ ಗಿರಿ ಅವರು ಅತ್ಯಂತ ಯಶಸ್ವಿಯಾದ ಮುಷ್ಕರವನ್ನು ಸಹ ಸಂಘಟಿಸಿದರು. ಇವರು ಅಖಿಲ ಭಾರತ ರೈಲ್ವೆ ಫೆಡರೇಷನ್ನಿನ ಅಧ್ಯಕ್ಷರಾಗಿದ್ದರು. ಎರಡು ಬಾರಿ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಅಧ್ಯಕ್ಷರಾಗಿಯೂ ಇದ್ದರು. 1927ರಲ್ಲಿ ಜಿನೀವದಲ್ಲಿ ಸೇರಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಇವರು ಭಾರತದ ಕಾರ್ಮಿಕರ ನಿಯೋಗಿಯಾಗಿ ಭಾಗವಹಿಸಿದರು. 1927-1930ರ ಅವಧಿಯಲ್ಲಿ ಹಲವು ಮುಷ್ಕರಗಳನ್ನು ಸಂಘಟಿಸಿದರಾದರೂ ಗಿರಿಯವರು ಮುಷ್ಕರಗಳನ್ನು ಎಂದೂ ಸ್ವಾಗತಿಸುತ್ತಿರಲಿಲ್ಲ. ಕಾರ್ಮಿಕರು ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ, ಮಾಲೀಕರಿಗೆ ಮುನ್ಸೂಚನೆಯನ್ನು ಕೊಟ್ಟು, ಸಂವಿಧಾನದ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ, ಮುಷ್ಕರ ಹೂಡಬೇಕೆಂಬುದು ಅವರ ಮತ.

ಬಂಗಾಳ, ನಾಗಪುರ ರೈಲ್ವೆ ಮುಷ್ಕರದಲ್ಲಿ ಸು. 60,000 ಕಾರ್ಮಿಕರು ಒಂದು ತಿಂಗಳ ಕಾಲ ಕೆಲಸಕ್ಕೆ ಹಾಜರಾಗದಿದ್ದಾಗ ಅವರ ಕುಟುಂಬಗಳ ರಕ್ಷಣೆ, ಪೋಷಣೆಗಳ ವ್ಯವಸ್ಥೆಯ ಪ್ರತಿಯೊಂದು ವಿವರವನ್ನೂ ಗಿರಿಯವರು ಪ್ರತ್ಯಕ್ಷ ಪ್ರವಾಸ ಭೇಟಿಗಳಿಂದ ನಿಯಂತ್ರಿಸಿದರು. ಇಂಥ ಬೃಹತ್ ಮುಷ್ಕರವನ್ನು ಗೌರವಯುತವಾಗಿ ನಿರ್ವಹಿಸಿ ಕಾರ್ಮಿಕ ಸಂಘಟನೆಯ ಸಾಮರ್ಥ್ಯ ಆಡಳಿತಕ್ಕೆ ಗೊತ್ತಾಗುವಂತೆ ಮಾಡಿದರು. ಆ ಸಂಘವನ್ನು ಸರ್ಕಾರ ಮನ್ನಿಸಬೇಕಾಯಿತು. ಕಾರ್ಮಿಕ ಕ್ಷೇತ್ರದಲ್ಲಿ ಗಿರಿಯವರಿಗೆ ಎಂ. ಎನ್. ಜೋಷಿಯವರು ಮಾರ್ಗದರ್ಶಕರಾಗಿದ್ದರು.
ಗಿರಿಯವರ ತಂದೆ ಕೇಂದ್ರ ವಿಧಾನ ಪರಿಷತ್ನಲ್ಲಿ 1927 ರಿಂದ 1930 ರವರಗೆ ಸದಸ್ಯರಾಗಿದ್ದರೂ ಗಿರಿಯವರು ವಿಧಾನಸಭಾ ಪ್ರವೇಶಕ್ಕಾಗಿ ಪ್ರಯತ್ನಮಾಡಿದವರಲ್ಲ. ಆದರೆ ಕಾರ್ಮಿಕರ ಹಿತ ಪಾರ್ಲಿಮೆಂಟರಿ ಚಟುವಟಿಕೆಗಳಿಂದ ಸಾಧಿತವಾಗುವುದೆಂದು ಅನಿಸಿದ ಮೇಲೆ ಆ ಬಗ್ಗೆ ಅವರಲ್ಲಿದ್ದ ವಿರೋಧಭಾವ ಹೋಯಿತು. 1934ರಲ್ಲಿ ಗಿರಿ ಅವರು ತಮ್ಮ ಸ್ನೇಹಿತರಾದ ರಾಜು ಅವರನ್ನು ಸೋಲಿಸಿ ಕೇಂದ್ರ ವಿಧಾನಸಭೆಗೆ ಚುನಾಯಿತರಾದರು (1934-37). ಆಗ ಅವರು ಕಾರ್ಮಿಕ ಸಮಸ್ಯೆಗಳತ್ತ ಸರ್ಕಾರದ ಗಮನಸೆಳೆಯಲು ಯತ್ನಿಸಿದರು. ಭಾರತದಲ್ಲೇ ರೈಲ್ವೆ ಎಂಜಿನ್‍ಗಳನ್ನು ತಯಾರಿಸುವುದು ಉಳಿತಾಯದ ಮಾರ್ಗವೆಂದು ಆಗಲೇ ಸೂಚಿಸಿದ್ದರು. ಸತ್ಯಮೂರ್ತಿ, ಭುಲಾಬಾಯಿ ದೇಸಾಯಿ, ಜಿನ್ನಾ, ಗೋವಿಂದವಲ್ಲಭಪಂತ್, ಮದನಮೋಹನ ಮಾಳವೀಯ, ಅಸಫ್ ಆಲಿ ಮುಂತಾದ ದಿಗ್ಗಜರಿಂದ ಕೇಂದ್ರೀಯ ವಿಧಾನಸಭೆಯಲ್ಲಿ ವಿ ವಿ ಗಿರಿ ಕಾರ್ಮಿಕ ಪ್ರಶ್ನೆಗಳನ್ನು ಪ್ರಬಲವಾಗಿ ಪ್ರತಿಪಾದಿಸಿ, ಎಲ್ಲರ ಗಮನ ಸೆಳೆದರು.

ಭಾರತದಲ್ಲಿ ಆರ್ಥಿಕ ಯೋಜನೆಗಳ ಮಾತು ಹೊಸದಾಗಿದ್ದ ಆ ಕಾಲದಲ್ಲಿ ಗ್ರಾಮೀಣ ಪ್ರಗತಿಗಾಗಿ ಆರ್ಥಿಕ ಯೋಜನೆಯೊಂದನ್ನು ರೂಪಿಸಿ ಕೇಂದ್ರ ವಿಧಾನ ಮಂಡಲದ ಮುಂದೆ ಗಿರಿಯವರು ಮಂಡಿಸಿದ್ದರು. ಕೈಗಾರಿಕೆಗಳ ವ್ಯಾಜ್ಯಗಳಲ್ಲಿ ಸಂಧಾನದ ಸಾಧನಗಳಾಗಿ ಮಂಡಳಿಗಳು ಇರಬೇಕೆಂದು ಆಗ ವಾದಿಸಿದ ಪರಿಣಾಮವಾಗಿ ಇಂದು ಆ ಬಗ್ಗೆ ಅನೇಕ ಕಾನೂನುಗಳಾಗಿ ಕೈಗಾರಿಕಾ ಸಂಸ್ಥೆಗಳು ವಿಫುಲ ಸೌಲಭ್ಯ ಪಡೆದಿವೆ. ಆದರೆ ಆಗ ಗಿರಿ ಅವರ ಈ ಮಾತುಗಳು ಹೊಸದಾಗಿ ಕಾಣುತ್ತಿದ್ದುವು.

1937ರಲ್ಲಿ ಪ್ರಾಂತೀಯ ವಿಧಾನ ಸಭೆಗಳಿಗೆ ಚುನಾವಣೆಗಳು ನಡೆದಾಗ, ಬ್ರಿಟಿಷ್ ಸರ್ಕಾರದ ಬೆಂಬಲವನ್ನೂ ಶ್ರೀಮಂತಿಕೆ, ಜಾತೀಯತೆ, ಹಾಗೂ ಅಧಿಕಾರ ಬಲವನ್ನೂ ಪಡೆದಿದ್ದ ಬೊಬ್ಬಿಲಿ ರಾಜರ ವಿರುದ್ಧವಾಗಿ ಗಿರಿಯವರು ಕಾಂಗ್ರೆಸ್ ಸ್ಪರ್ಧಿಯಾಗಿ ನಿಂತು ಗೆದ್ದು ನೆಹರೂ ಅವರ ಪ್ರಶಂಸೆಗೆ ಪಾತ್ರರಾದರು.

1937-39 ಮದ್ರಾಸಿನಲ್ಲಿ ಸಿ ರಾಜಗೋಪಾಲಾಚಾರಿ ಅವರು ರಚಿಸಿದ ಕಾಂಗ್ರೆಸ್ ಮಂತ್ರಿಮಂಡಲದಲ್ಲಿ ಕಾರ್ಮಿಕ, ಕೈಗಾರಿಕೆ, ಮತ್ತು ಸಹಕಾರ ಮಂತ್ರಿಯಾಗಿದ್ದ ಗಿರಿಯವರು ಕಾರ್ಮಿಕ ನೀತಿಯನ್ನು ಸ್ಪಷ್ಟೀಕರಿಸುತ್ತ ಮಾಲೀಕರ, ಕಾರ್ಮಿಕರ ಮತ್ತು ಸರ್ಕಾರದ ತ್ರಿಪಕ್ಷ ಸಮ್ಮೇಳನವನ್ನು ಕರೆದರು. ಆಗ ಆ ಪ್ರಾಂತ್ಯದ ಮುಖ್ಯ ಮಂತ್ರಿಯಾಗಿದ್ದ ರಾಜಗೋಪಾಲಾಚಾರಿಯವರು ಇದನ್ನು ಗಿರಿಯವರ ದರ್ಬಾರ್ ಎಂದು ನಗೆಯಾಡಿದರು. ಆಗಿನ ರಾಜ್ಯಪಾಲರೂ ಇದರ ಬಗ್ಗೆ ತಾತ್ಸಾರ ಭಾವ ತಳೆದರು. ಭಾರತೀಯ ವಲಸೆಗಾರರ ಸಮಸ್ಯೆಯನ್ನು ಗಿರಿಯವರು ಆಗ ಕೈಗೆತ್ತಿಕೊಂಡರು. 1938ರಲ್ಲಿ ಕಾಂಗ್ರೆಸ್ ರಚಿಸಿದ ರಾಷ್ಟ್ರೀಯ ಯೋಜನಾ ಆಯೋಗಕ್ಕೆ ಗಿರಿಯವರು ಸಂಚಾಲಕರಾದರು. ಭಾರತದ ಪಂಚವಾರ್ಷಿಕ ಯೋಜನೆಗಳ ಭಾವನೆ ರೂಪುಗೊಂಡದ್ದು ಆಗ.

ಪ್ರಕಾಶಂ ಅವರು ಮದ್ರಾಸಿನಲ್ಲಿ ರಚಿಸಿದ ಸರ್ಕಾರದಲ್ಲೂ ಗಿರಿಯವರು ಮಂತ್ರಿಯಾಗಿದ್ದರು (1946-1947). ಅನಂತರ ಇವರು ಶ್ರೀಲಂಕ (ಸಿಂಹಳ)ದಲ್ಲಿ ಭಾರತದ ಹೈಕಮಿಷನರಾಗಿದ್ದರು (1947-1951). 1952ರ ಮೇ ತಿಂಗಳಿಂದ 1954ರ ಸೆಪ್ಟೆಂಬರ್ವರೆಗೆ ಇವರು ಕೇಂದ್ರ ಸರ್ಕಾರದ ಕಾರ್ಮಿಕ ಮಂತ್ರಿಯಾಗಿದ್ದರು. ಕಾರ್ಮಿಕ ನೀತಿಯ ವಿಚಾರವಾಗಿ ಭಿನ್ನಾಭಿಪ್ರಾಯ ಬಂದುದರಿಂದ ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 1952ರಿಂದ 1957ರವರಗೆ ಇವರು ಲೋಕಸಭಾ ಸದಸ್ಯರಾಗಿದ್ದರು. 1958ರಲ್ಲಿ ಇವರು ಸಾಮಾಜಿಕ ಕಾರ್ಯದ ಭಾರತೀಯ ಸಮ್ಮೇಳನದ ಚುನಾಯಿತ ಅಧ್ಯಕ್ಷರಾಗಿದ್ದರು. ಇವರು ಕಾರ್ಮಿಕ ಅರ್ಥಶಾಸ್ತ್ರದ ಭಾರತೀಯ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದರು. ಭಾರತೀಯ ಕಾರ್ಮಿಕ ಸಂಘ ಚಳವಳಿ, ಕಾರ್ಮಿಕ ಅರ್ಥಶಾಸ್ತ್ರ ಇವುಗಳ ಬೆಳೆವಣಿಗೆಗೆ ಗಿರಿಯವರು ಬಹಳ ಮಟ್ಟಿಗೆ ಕಾರಣ.

ಗಿರಿಯವರು 1957-1960ರಲ್ಲಿ ಉತ್ತರ ಪ್ರದೇಶಕ್ಕೂ 1960-1965ರಲ್ಲಿ ಕೇರಳಕ್ಕೂ 1965-1967ರಲ್ಲಿ ಕರ್ನಾಟಕಕ್ಕೂ ರಾಜ್ಯಪಾಲರಾಗಿದ್ದರು. 1967ರ ಮೇ 13ರಿಂದ 1969ರ ಮೇ 3ರವರೆಗೆ ಇವರು ಭಾರತದ ಮೂರನೆ ಉಪರಾಷ್ಟ್ರಪತಿಯಾಗಿಯೂ ರಾಜ್ಯಸಭೆಯ ಅಧ್ಯಕ್ಷರಾಗಿಯೂ ಇದ್ದರು. ಭಾರತದ ರಾಷ್ಟ್ರಪತಿಯಾಗಿದ್ದ ಜಾ಼ಕಿರ್ ಹುಸೇನ್ 1969ರ ಮೇ 3ರಂದು ನಿಧನರಾದಾಗ ಹಂಗಾಮಿರಾಷ್ಟ್ರಪತಿಯಾದರು. ಅನಂತರ ಸ್ಪರ್ಧಿಸಿ ಜಯಶೀಲರಾಗಿ 1969ರ ಆಗಸ್ಥ 24ರಂದು ರಾಷ್ಟ್ರಪತಿಯಾದರು.

ಗಿರಿಯವರ ಪತ್ನಿ ಸರಸ್ವತಿಬಾಯಿ ಗಿರಿಯವರು ಬಳ್ಳಾರಿ ಜಿಲ್ಲೆಯವರು. ಗಿರಿದಂಪತಿಗಳಿಗೆ ಹದಿನಾರು ಮಕ್ಕಳೂ ನಲವತ್ತು ಮೊಮ್ಮಕ್ಕಳೂ ಹದಿಮೂರು ಮರಿಮಕ್ಕಳೂ ಇದ್ದಾರೆ.

 
ಗಿರಿಯವರು ಒಳ್ಳೆಯ ಲೇಖಕ, ವಾಗ್ಮಿ. ಇಂಡಸ್ಟ್ರಿಯಲ್ ರಿಲೇಷನ್ಸ್, ಲೇಬರ್ ಪ್ರಾಬ್ಲೆಮ್ಸ್ ಇನ್ ಇಂಡಿಯನ್ ಇಂಡಸ್ಟ್ರಿ ಮುಂತಾದ ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಹಲವು ಇಂದಿಗೂ ಆಯಾ ಕ್ಷೇತ್ರಗಳಲ್ಲಿ ಪ್ರಮಾಣ ಗ್ರಂಥಗಳಾಗಿವೆ. ಇವರಿಗೆ 1975ರಲ್ಲಿ ಭಾರತ ಸರ್ಕಾರ ‘ಭಾರತರತ್ನ’ ಪ್ರಶಸ್ತಿ ನೀಡಿ ಗೌರವಿಸಿತು. ಇವರು 1980ರಲ್ಲಿ ನಿಧನರಾದರು. 

ಆಜೀವಪರ್ಯಂತ ಸಮಾಜವಾದಿ ವಿಚಾರಧಾರೆಯ ಒಲವಿದ್ದರೂ, ಒಣ ಸೈದ್ಧಾಂತಿ ಸಮಾಜವಾದಿಯಾಗಿರಲಿಲ್ಲ. ಇವರದು ವ್ಯಾವಹಾರಿಕ ಹಾಗೂ ಮಾನವೀಯ ದೃಷ್ಟಿ. ಇವರ ದೃಷ್ಟಿಯಲ್ಲಿ ಸಮಾಜವೆಂಬ ಮತದ ಬೇರು ಮನುಷ್ಯ. ‘ಲಕ್ಷಾಂತರ ಜನರಿಗೆ ಉದ್ಯೋಗ’ ವಿ.ವಿ. ಗಿರಿ ಇವರ ನಿತ್ಯ ಜಪವಾಗಿತ್ತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ